ವೀರರಾಜೇಂದ್ರ 1 (ದೊಡ್ಡ ವೀರರಾಜೇಂದ್ರ)
	ಕೊಡಗಿನ ಅರಸು (1787-1809). ಕೊಡಗಿನ ಹಾಲೇರಿ ಅರಸುಮನೆತನದಲ್ಲಿ ಹೆಸರುವಾಸಿಯಾದವ. ಇವನ ತಂದೆ ಒಂದನೆಯ ಲಿಂಗರಾಜ ನಿಧನಹೊಂದಿದಾಗ, ವೀರರಾಜೇಂದ್ರ ಅಪ್ರಾಪ್ತವಯಸ್ಕನೆಂಬ ನೆಪಹೂಡಿ ಹೈದರ್ ಅಲಿ ತಾನೇ ರಾಜ್ಯಾಡಳಿತ ನಿರ್ವಹಿಸತೊಡಗಿ, ರಾಣಿಯನ್ನೂ ವೀರರಾಜೇಂದ್ರ ಮತ್ತು ಅವನ ತಮ್ಮ ಲಿಂಗರಾಜನನ್ನೂ ಗೊರೂರಿನಲ್ಲಿ ಇಟ್ಟ. ಇದು ಕೊಡಗಿನ ಜನರ ಆಗ್ರಹಕ್ಕೆ ಕಾರಣವಾಗಿ 1782ರಲ್ಲಿ ಅವರು ದಂಗೆ ಎದ್ದರು. ಟಿಪ್ಪುಸುಲ್ತಾನ್ 1785ರಲ್ಲಿ ಮಂಗಳೂರು ವಿಜಯದ ಅನಂತರ ಶ್ರೀರಂಗಪಟ್ಟಣಕ್ಕೆ ಬರುವ ಹಾದಿಯಲ್ಲಿ ಕೊಡಗಿನ ಜನ ತನಗೆ ನಿಷ್ಠೆಯಿಂದ ನಡೆದುಕೊಂಡಲ್ಲಿ ಅವರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿ ಪುನಃ ಕೊಡಗಿನ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ. ಆದರೆ ಮುಂದೆ ತನ್ನ ನೀತಿಗಳಿಂದ ಕೊಡಗರನ್ನು ಇನ್ನೂ ಉದ್ರೇಕಿಸಿದ. ವೀರರಾಜೇಂದ್ರ ಮತ್ತು ಇತರ ರಾಜಬಂಧುಗಳನ್ನು ಪಿರಿಯಾಪಟ್ಟಣ ಕೋಟೆಯೊಳಗೆ ಸೆರೆಯಿಟ್ಟ. ಪುನಃ ಕೊಡಗಿನ ಜನ ದಂಗೆಯೆದ್ದರು. ಈ ಸುದ್ದಿ ವೀರರಾಜೇಂದ್ರನಿಗೆ ಮುಟ್ಟಿ, ತನ್ನ ಹಿತೈಷಿಗಳೊಡನೆ ಗುಟ್ಟಾಗಿ ಸಂಪರ್ಕ ಬೆಳೆಸಿ, ಅವರ ನೆರವಿನಿಂದ 1788 ಡಿಸೆಂಬರ್‍ನಲ್ಲಿ ಒಂದು ರಾತ್ರಿ ತನ್ನ ಬಂಧುಮಿತ್ರರೊಂದಿಗೆ ತಪ್ಪಿಸಿಕೊಂಡು, ತನ್ನ ರಾಜ್ಯದೊಳಕ್ಕೆ ಹೋಗಿ ಸೇರಿಕೊಂಡ. ಅಲ್ಲಿ ದೊಡ್ಡ ಸೈನ್ಯ ಕಟ್ಟಿ ಕೊಡಗಿನ ಕೋಟೆಗಳಲ್ಲಿದ್ದ ಟಿಪ್ಪುಸುಲ್ತಾನನ ಸೈನ್ಯವನ್ನೂ ಕೊಡಗಿನ ಹಲವೆಡೆ ನೆಲಸಿದ್ದ ಮುಸಲ್ಮಾನರನ್ನೂ ಓಡಿಸಲು ಕಾರ್ಯೋನ್ಮುಖನಾದ. ಇದರಿಂದ ಕೆರಳಿದ ಟಿಪ್ಪುಸುಲ್ತಾನ್ ಗುಲಾಮ್ ಅಲಿಯ ನೇತೃತ್ವದಲ್ಲಿ ದೊಡ್ಡ ಸೈನ್ಯವೊಂದನ್ನು ಕಳುಹಿಸಿದ. ಆದರೆ ಈ ಸಂದರ್ಭದಲ್ಲಿ ಚಿರಕಲ್ಲಿನ ರಾಜ ಮಲಯಾಳಿ ಸೈನಿಕರನ್ನು ವೀರರಾಜೇಂದ್ರನ ವಿರುದ್ಧ ಕಳುಹಿಸಿದ. ಆದರೆ ಕೊಡಗಿನ ಸೈನ್ಯ ಈ ದಾಳಿಗಳನ್ನು ಸಮರ್ಥವಾಗಿ ತಡೆಯಿತು. ಗುಲಾಮ್ ಅಲಿ ಬೆಟ್ಟಗುಡ್ಡಗಳ ಕಡೆ ನುಗ್ಗಲು ಸಾಧ್ಯವಾಗದೆ ಕೆಲವು ಬಯಲುಗಳಲ್ಲಷ್ಟೆ ತನ್ನ ಚಲನವಲನ ಗಳನ್ನು ಸೀಮಿತಗೊಳಿಸಬೇಕಾಯಿತು. ಅಷ್ಟರಲ್ಲಿ ಮಲಯಾಳದಲ್ಲಿ ದಂಗೆಗಳಾದುದರಿಂದ ಗುಲಾಮ್ ಅಲಿ ಅತ್ತ ನಡೆಯಬೇಕಾಯಿತು. ಈ ಮಧ್ಯದಲ್ಲಿ ಟಿಪ್ಪುಸುಲ್ತಾನ್ ಕುಶಾಲನಗರ, ಮಡಿಕೇರಿ, ಬೆಪ್ಪುನಾಡು, ಭಾಗಮಂಡಲ ಕೋಟೆಗಳಲ್ಲಿದ್ದ ತನ್ನ ಠಾಣ್ಯಗಳನ್ನು ಭದ್ರಪಡಿಸಲು ಬುರ್ಹಾನುದ್ದೀನನ ನೇತೃತ್ವದಲ್ಲಿ ಮತ್ತಷ್ಟು ಸೈನ್ಯವನ್ನೂ ಸಾಮಗ್ರಿಗಳನ್ನೂ ಕೊಡಗಿಗೆ ಕಳುಹಿಸಿದ. ಆದರೆ ವೀರರಾಜೇಂದ್ರನ ಹೊಡೆತ ಜೋರಾಗಿ ಬುರ್ಹಾನುದ್ದೀನನಿಗೆ ಮಡಿಕೇರಿಯನ್ನು ಮಾತ್ರ ತಲಪಲು ಸಾಧ್ಯವಾಯಿತು. ಬುರ್ಹಾನುದ್ದೀನ್ ಮತ್ತಷ್ಟು ಸೈನ್ಯವನ್ನು ತರಲು ಶ್ರೀರಂಗಪಟ್ಟಣಕ್ಕೆ ಹಿಂದಿರುಗಿದ. ವೀರರಾಜೇಂದ್ರ ಈ ಸಂದರ್ಭದಲ್ಲಿ ಕುಶಾಲನಗರ ಕೋಟೆಯನ್ನೂ ಬೆಪ್ಪುನಾಡು ಕೋಟೆಯನ್ನೂ ವಶಪಡಿಸಿಕೊಂಡ (1789 ಜೂನ್ ಮತ್ತು ಆಗಸ್ಟ್). ಅನಂತರ ಬುರ್ಹಾನುದ್ದೀನ್ ಬೃಹತ್ ಸೈನ್ಯದೊಂದಿಗೆ ಬಂದರೂ ಈ ಕೋಟೆಗಳನ್ನು ಪುನರ್ವಶಪಡಿಸಿ ಕೊಳ್ಳಲಾಗಲಿಲ್ಲ. ವೀರರಾಜೇಂದ್ರ ಭಾಗಮಂಡಲ ಕೋಟೆಯನ್ನೂ ಹಿಡಿದ. ಇವನ ಸೈನಿಕರು ಘಟ್ಟದ ಕೆಳಗಣ ಸುಳ್ಯ ಮತ್ತು ಪುತ್ತೂರು ಮಾಗಣೆಯ ಭಾಗಗಳನ್ನು ವಶಪಡಿಸಿಕೊಂಡರು. ಅಲ್ಲದೆ ಟಿಪ್ಪುವಿನ ರಾಜ್ಯದಲ್ಲಿದ್ದ ಅರಕಲಗೂಡು, ಕೊಣನೂರು ಪ್ರದೇಶವನ್ನೂ ಕೊಳ್ಳೆಹೊಡೆದರು. 1790ರ ಹೊತ್ತಿಗೆ ಮಡಿಕೇರಿ ಕೋಟೆಯ ಹೊರತು ಉಳಿದ ಕೊಡಗಿನ ಭಾಗವೆಲ್ಲ ವೀರರಾಜೇಂದ್ರನ ಹಿಡಿತದಲ್ಲಿತ್ತು.

	ಇದು ಬ್ರಿಟಿಷರಿಗೂ ಟಿಪ್ಪುವಿಗೂ ವಿರಸ ಬೆಳೆದಿದ್ದ ಕಾಲ. ತಲಚೇರಿ ಯಲ್ಲಿದ್ದ ಬ್ರಿಟಿಷ್ ಅಧಿಕಾರಿ ರಾಬರ್ಟ್ ಟೇಲರ್ ಮುಂದೆ ಸಂಭವಿಸ ಬಹುದಾದ ಯುದ್ಧದಲ್ಲಿ ಬ್ರಿಟಿಷರ ಪರ ವಹಿಸಲು ವೀರರಾಜೇಂದ್ರನನ್ನು ಆಹ್ವಾನಿಸಿದ. 1790 ಅಕ್ಟೋಬರ್‍ನಲ್ಲಿ ತಲಚೇರಿಯಲ್ಲಿ ಒಂದು ಒಪ್ಪಂದವಾಗಿ ಅದರಂತೆ ಟಿಪ್ಪುಸುಲ್ತಾನನನ್ನು ಈ ಎರಡು ಪಕ್ಷಗಳವರೂ ಶತ್ರುವಾಗಿ ಪರಿಗಣಿಸಬೇಕು, ಬ್ರಿಟಿಷ್ ಸೈನ್ಯಕ್ಕೆ ವೀರರಾಜೇಂದ್ರ ಎಲ್ಲ ರೀತಿಯ ನೆರವು ನೀಡಬೇಕು. ಪ್ರತಿಯಾಗಿ ಬ್ರಿಟಿಷರು ಕೊಡಗಿನ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವುದು ಮತ್ತು ಟಿಪ್ಪುವಿನ ಜೊತೆ ಶಾಂತಿ ಒಪ್ಪಂದವಾದ ಪಕ್ಷದಲ್ಲಿ ಕೊಡಗಿನ ಹಿತ ಪಾಲಿಸುವುದಾಗಿ ತೀರ್ಮಾನವಾಯಿತು. ಈ ರಾಜಕೀಯ ಬೆಳೆವಣಿಗೆ ಗಮನಿಸಿದ ಟಿಪ್ಪುಸುಲ್ತಾನ್ ಪುನಃ ಮಡಿಕೇರಿಗೆ ಸೈನ್ಯಸಹಾಯವನ್ನು ಕಳುಹಿಸಿದ. ಆದರೆ ಕೆಲವೇ ದಿನಗಳಲ್ಲಿ ವೀರರಾಜೇಂದ್ರ ಮಡಿಕೇರಿಯನ್ನೂ ಆಕ್ರಮಿಸಿದ.

	1791ರಲ್ಲಿ ಟಿಪ್ಪುವಿನ ವಿರುದ್ಧದ ಕಾರ್ಯಾಚರಣೆಗೆ ಮುಂಬಯಿಯ ಗವರ್ನರ್ ಆಗಿದ್ದ ಜನರಲ್ ಅಬರ್‍ಕ್ರಾಂಬಿಯ ಸೈನ್ಯ ಕೊಡಗಿನ ಮೂಲಕ ಸಾಗಿದಾಗ ವೀರರಾಜೇಂದ್ರ ಅದಕ್ಕೆ ಸಾಕಷ್ಟು ಸಹಾಯ ಸೌಕರ್ಯಗಳನ್ನು ಒದಗಿಸಿದ. 1792ರಲ್ಲಿ ಟಿಪ್ಪುವಿನೊಡನೆ ಬ್ರಿಟಿಷರು ಕೌಲು ಮಾಡಿಕೊಂಡಾಗ ವೀರರಾಜೇಂದ್ರ ರಾಜ್ಯ ಟಿಪ್ಪುವಿನ ಕೈಸೇರದಂತೆ ನೋಡಿಕೊಳ್ಳಲಾಯಿತು. 1793 ಮಾರ್ಚ್‍ನಲ್ಲಿ ಮತ್ತೊಂದು ಒಪ್ಪಂದವಾಗಿ ವೀರರಾಜೇಂದ್ರ ಬ್ರಿಟಿಷರಿಗೆ ವಾರ್ಷಿಕವಾಗಿ 24,000 ರೂಪಾಯಿ ಕಪ್ಪ ಕೊಡಬೇಕು; ಇವನ ರಾಜ್ಯಕ್ಕೆ ಅವರು ರಕ್ಷಣೆ ಒದಗಿಸುವುದು ಎಂದು ತೀರ್ಮಾನವಾಯಿತು.

	4ನೆಯ ಮೈಸೂರು ಯುದ್ಧದ ಕಾಲದಲ್ಲೂ ವೀರರಾಜೇಂದ್ರ ಬ್ರಿಟಿಷರ ಸೈನ್ಯ ಸಾಗಾಣಿಕೆಗೆ ಸಹಾಯ ನೀಡಿದ. ಇದರಿಂದ ಇವರ ಮೈತ್ರಿ ಬೆಳೆಯಿತು. ಟಿಪ್ಪುವಿನ ಯುದ್ಧಾಶ್ವ, ಪಲ್ಲಕ್ಕಿ ಮತ್ತು ಅಂಬಾರಿಗಳನ್ನು ಬಳುವಳಿಯಾಗಿ ಕೊಟ್ಟುದಲ್ಲದೆ ತಮ್ಮ ಆಶ್ರಯದಲ್ಲಿ ರಾಜ್ಯಭಾರ ನಡೆಸಲು ವೀರರಾಜೇಂದ್ರನಿಗೆ ಅನುವು ಮಾಡಿಕೊಟ್ಟರು. ಮುಂದೆ ತನ್ನ ಸಾವಿನವರೆಗೂ ಬ್ರಿಟಿಷ್ ರೆಸಿಡೆಂಟರು, ಗವರ್ನರ್ ಜನರಲ್‍ನೊಡನೆ ಸ್ನೇಹದಿಂದಿದ್ದ. ಈ ಕಾಲದಲ್ಲಿ ವೀರರಾಜೇಂದ್ರ ಕೊಡಗಿನ ಅಭಿವೃದ್ಧಿಗಾಗಿ ಶ್ರಮಿಸಿದ. ರೈತರಿಗೆ ಉತ್ತೇಜನ ಕೊಟ್ಟ. ವ್ಯವಸಾಯ ಅಭಿವೃದ್ಧಿ ಮಾಡಿದ. ಆದರೆ ತನ್ನ ಆಳಿಕೆಯ ಕೊನೆಗಾಲದಲ್ಲಿ ಸ್ವಲ್ಪ ಕ್ರೂರಿಯಾಗಿ ನಡೆದುಕೊಂಡು ರಾಜಸಂಬಂಧಿಗಳೇ ಮೊದಲಾದ ಹಲವು ಜನರನ್ನು ಕೊಲೆ ಮಾಡಿಸಿದನೆಂಬ ಅಭಿಪ್ರಾಯವಿದೆ.

	ವೀರರಾಜೇಂದ್ರ 1791ರಲ್ಲಿ ನಾಲ್ಕುನಾಡು ಅರಮನೆಯನ್ನು ಕಟ್ಟಿಸಿದ. 1796ರಲ್ಲಿ ಇದೇ ಅರಮನೆಯಲ್ಲಿ ಪಟ್ಟಾಭಿಷೇಕ ಮಾಡಿಸಿಕೊಂಡ. ಅಲ್ಲದೆ ಮಹದೇವಮ್ಮಾಜಿ ಎಂಬಾಕೆಯನ್ನು ಮದುವೆಯಾದ. (1791) ಜನರಲ್ ಅಬರ್‍ಕ್ರಾಂಬಿಯನ್ನು ಮೊದಲು ಭೇಟಿಮಾಡಿದ ತಾಣದಲ್ಲಿ ವೀರರಾಜೇಂದ್ರ ಪೇಟೆ (ಈಗಿನ ವಿರಾಜಪೇಟೆ) ಸ್ಥಾಪಿಸಿದ. ಮುರುಘಾ ಮಠದ ಶಿಷ್ಯನಾದ ಇವನು ಅದರ ಶಾಖೆಗಳಾಗಿ ಸಿದ್ಧಾಪುರ ಮತ್ತು ಮಹದೇವಪುರ ಮಠಗಳನ್ನೂ ಬಸವೇಶ್ವರ ದೇವಸ್ಥಾನವನ್ನೂ ಸ್ಥಾಪಿಸಿದ. ತನ್ನ ಎರಡನೆಯ ಹೆಂಡತಿಯ ಹೆಸರಿನಲ್ಲಿ ಮಹದೇವಪೇಟೆ ಸ್ಥಾಪಿಸಿದ. ಈತ 1809 ಜೂನ್ 29ರಂದು ನಿಧನನಾದ.	
	(ಸಿ.ಕೆ.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ